ಫಿಲಿಪ್ಸ್, ಆಂಬ್ರೋಸ್
1675-1749 ಕವಿ. ಹುಟ್ಟಿದ್ದು ಶ್ರೋಪ್ ಷೈರ್‍ನಲ್ಲಿ. ಕೇಂಬ್ರಿಜ್‍ನ ಸೇಂಟ್ ಜಾನ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಯಿತು. 1695ರಲ್ಲಿ ಈತನ ಮೊದಲ ಕೃತಿ ಈತ ಓದಿದ ಕಾಲೇಜಿನಿಂದಲೇ ಪ್ರಕಟಗೊಂಡಿತು. ಈತ ಬರೆದ ದಿ ಡಿಸ್ಟ್ರೆಸ್ಟ್ ಮದರ್ ಎಂಬ ದುರಂತ ನಾಟಕವನ್ನು 1712ರ ಫೆಬ್ರವರಿಯಲ್ಲಿ ಡೂರಿಲೇನ್ನಲ್ಲಿ ಅಭಿನಯಿಸಲಾಯಿತು. ಇದು ರಾಸೀಸನ ಆಂಡ್ರೊಮ್ಯಾಕ್ ಕೃತಿಯ ಅನುವಾದ. ಆದರೂ ಈ ನಾಟಕಕ್ಕೆ ಭಾರಿ ಪ್ರೋತ್ಸಾಹ ದೊರೆತಿತು. ಈತನು ಸ್ಯಾಪ್ಟೊಕವಿಯ ಓಡ್ ಟು ಅಪ್ರೊಡೈಟನ್ನು ಅನುವಾದಿಸಿ ಸ್ವೆಕ್ಟೇಟರ್ ಪತ್ರಿಕೆಯಲ್ಲಿ ಪ್ರಕಟಿಸಿದ. ಆದರೆ ಪೋಪ್ ಮತ್ತಿತರ ಕವಿಗಳು ಈತನ ಬಗ್ಗೆ ಲೇವಡಿ ಮಾಡಿದರು. ಈತ 1722ರಲ್ಲಿ ದಿ ಬ್ರಿಟನ್ ಹಾಗೂ 1723ರಲ್ಲಿ ಹಂಫ್ರೆ, ಡ್ಯೂಕ್ ಆಫ್ ಗ್ಲೌಸೆಸ್ಟರ್ ಎಂಬ ಇನ್ನೆರಡು ದುರಂತ ನಾಟಕಗಳನ್ನು ಹೊರತಂದ. ಕೆಲಕಾಲ ಈತ ದಿ ಫ್ರೀ ತಿಂಕರ್ ಎಂಬ ನಿಯತಕಾಲಿಕೆಯನ್ನು ನಡೆಸಿದ.					    (ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ